ಕೇರಳದ ಮೂರ್ತಿ ಶಿಲ್ಪ

ಕೇರಳದ ಪ್ರಾಚೀನ ಮೂರ್ತಿಶಿಲ್ಪಗಳು ದ್ರಾವಿಡ ಶೈಲಿಗೆ ಸೇರಿದವು. ಕರಾವಳಿಯ ದಕ್ಷಿಣದ ಅಂಚಿನ ಬಳಿ ಇರುವ ಕವಿಯೂರ್ ಎಂಬಲ್ಲಿ ಬಂಡೆಯಲ್ಲಿ ಕೊರೆದಿರುವ ಶಿಲ್ಪ ಪ್ರಾಯಶ: ಕೇರಳ ಶೈಲಿಯ ಅತ್ಯಂತ ಪ್ರಾಚೀನ ಉದಾಹರಣೆ. ಇದರಲ್ಲಿ ದ್ವಾರಪಾಲ ಅಥವಾ ಒಬ್ಬ ಸ್ಥಳೀಯ ಗಾಯಕ ಕೈಕಟ್ಟಿ ನಿಂತಂತಿದೆ; ಅಂಗಾಂಗ ಸೌಷ್ಠವ, ಕನಿಷ್ಠ ಅಲಂಕರಣ ಮುಂತಾದ ವೈಶಿಷ್ಟ್ಟ್ಯಗಳಿಂದ ಕೂಡಿ ಇದು ಪಲ್ಲವ ಶೈಲಿಯಲ್ಲಿದೆ. ವಿಳಿಂಬಜಮ್ ಗುಹೆಯ ಮುಂಭಾಗದಲ್ಲಿರುವ ಶಿಲ್ಪಗಳೂ ಇದೇ ಕಾಲದವು. ಚಿತರಲ್ ಬೆಟ್ಟದಲ್ಲಿರುವ ಜೈನ ಕೆತ್ತನೆಗಳು ಮಾವೆಲಿಕರದ ಬುದ್ಧ ಪ್ರತಿಮೆ 9ನೆಯ ಶತಮಾನದ ಶಿಲ್ಪಗಳು. ಇವೆಲ್ಲವೂ ಪಲ್ಲವ ಶೈಲಿಯಿಂದ ಬೆಳೆದ ಶಿಲ್ಪನಿರೂಪಣ ತಂತ್ರಕ್ಕೆ ಸೇರಿವೆ. ಬುದ್ಧನ ಪ್ರತಿಮೆಯ ರುಂಡ ಮತ್ತು ಕೇಶನಿರೂಪಣೆಗಳು ನಾಗಪಟ್ಟಣದ ಕಂಚಿನ ಪ್ರತಿಮೆಗಳನ್ನು e್ಞÁಪಕಕ್ಕೆ ತರುತ್ತವೆ. ನಿರಮಂಕರದಲ್ಲಿರುವ, ಸುಮಾರು 14ನೆಯ ಶತಮಾನದ ವಿಷ್ಣುಮೂರ್ತಿ ಕೇರಳದ ಉತ್ತಮ ಶಿಲ್ಪಗಳಲ್ಲೊಂದು. ಚತುರ್ಭುಜನಾಗಿ, ಸಮಭಂಗದಲ್ಲಿ ಕಟಿ ಮತ್ತು ವರದ ಹಸ್ತಗಳನ್ನುಳ್ಳ ಈ ಮೂರ್ತಿ ಸಮಕಾಲೀನ ದಕ್ಷಿಣ ಭಾರತದ ಶೈಲಿಯನ್ನನುಸರಿಸಿದೆ. ಪ್ರಾಚೀನ ನಿರೂಪಣ ಸಂಪ್ರದಾಯಗಳನ್ನೇ ಉಳಿಸಿಕೊಂಡಿದೆ. ಈ ಸಂಪ್ರದಾಯನಿಷ್ಠೆ ಕೇರಳ ಶಿಲ್ಪದ ವೈಶಿಷ್ಟ್ಯ. ತ್ರಿಚೂರು ಜಿಲ್ಲೆಯ ಇರುನಿಲಂ ಕೊಡೆಯಲ್ಲಿರುವ ಹಲವು ಅರೆಶಿಲ್ಪಗಳೂ ವೈಕ್ಕಂ ಗುಡಿಯಲ್ಲಿರುವ ಶಿಲ್ಪಗಳೂ ಅನಂತರದ ಕೇರಳ ಶೈಲಿಯಲ್ಲಿವೆ. ತಿರುವನಂತಪುರದ ಕಟ್ಟಡದಲ್ಲಿರುವ ಶಿಲ್ಪಕೃತಿಗಳು ದಕ್ಷಿಣ ಭಾರತದ ವಿಜಯನಗರದ ಶೈಲಿಯಲ್ಲಿವೆ. ಕೇರಳದಲ್ಲಿ ಶಿಲಾಶಿಲ್ಪಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. 8-9ನೆಯ ಶತಮಾನಗಳ ಪ್ರಾಚೀನ ಶಿಲ್ಪಗಳೂ 16ನೆಯ ಶತಮಾನದ ಅನಂತರದ ಕೆಲವು ಶಿಲ್ಪಗಳೂ ಸಮಕಾಲೀನ ದಕ್ಷಿಣ ಭಾರತದ ಶೈಲಿಯಲ್ಲಿದ್ದರೂ 10ನೆಯ ಶತಮಾನಕ್ಕಿಂತ ಹಿಂದಿನ ಶಿಲ್ಪ ಸಂಪ್ರದಾಯವನ್ನೇ ಬಹುಮಟ್ಟಿಗೆ ಉಳಿಸಿಕೊಂಡು ಬಂದಿರುವ ಕೇರಳೀಯ ಶಿಲ್ಪಶೈಲಿ ಸಹ ಆ ಪ್ರದೇಶದಲ್ಲಿ ಬಹುವಾಗಿ ಕಾಣಿಸಿಕೊಳ್ಳುತ್ತವೆ.

	ಕೇರಳದ ದಾರುಶಿಲ್ಪ ವಿಶೇಷವಾದ್ದು. ಕಟ್ಟಡದ ಮರದ ಭಾಗಗಳನ್ನು ಖಾಲಿ ಬಿಡದೆ ಅನೇಕ ಜ್ಯಾಮಿತೀಯ ಲತಾ ಅಥವಾ ಮೂರ್ತಿಶಿಲ್ಪಗಳಿಂದ ಅಲಂಕರಿÀಸುವುದು ರೂಢಿ. ಈ ಶಿಲ್ಪಗಳಲ್ಲಿ ಮೂರ್ತಿಗಳೂ ಕಥಾನಿರೂಪಣೆಗಳೂ ಸಂಕೆರಿ ರೂಪಗಳೂ ಕಂಡುಬರುತ್ತವೆ. ತ್ರಿಪುನಿಥರ, ತ್ರಿಚೂರು ಮೊದಲಾದ ಅನೇಕ ದೇಗುಲಗಳಲ್ಲಿಯ ನಮಸ್ಕಾರಮಂಟಪಗಳ ಭುವನೇಶ್ವರಿಗಳು ನಯನಮನೋಹರವಾದ ಕೆತ್ತನೆಗಳನ್ನೊಳಗೊಂಡಿವೆ. ಬ್ರಹ್ಮನ ಸುತ್ತಲೂ ಅಷ್ಟದಿಕ್ಪಾಲಕರನ್ನು ರೂಪಿಸುವುದು ಇಲ್ಲಿ ಸಾಮಾನ್ಯ. ಪಥಕುಲಂಗುರ, ಎತ್ತುಮನೂರು ಮುಂತಾದ ಅನೇಕ ಗುಡಿಗಳಲ್ಲಿ ರಾಮಾಯಣದ ಕಥಾಚಿತ್ರಣ ಸಾಲುಸಾಲಾಗಿ ಕಂಡುಬರುತ್ತದೆ. ಕೇರಳೀಯರ ಮನವನ್ನು ಸೂರೆಗೊಂಡ ರಾಮಾಯಣ ಕಥಾವಸ್ತುವಿನ ನಿರೂಪಣೆಯಲ್ಲಿ ಶಾಸ್ತ್ರೀಯ ಸಂಪ್ರದಾಯಗಳನ್ನು ಅಷ್ಟಾಗಿ ಗಮನಿಸಿಲ್ಲ. ಆದರೆ ಅವುಗಳಲ್ಲಿ ಕಂಡುಬರುವ ಚಾತುರ್ಯ, ಸೌಂದರ್ಯ ಸಮನ್ವಯ, ಇವು ಕೇರಳೀಯ ಜಾನಪದ ಶಿಲ್ಪಕಲೆಯ ಔನ್ನತ್ಯವನ್ನು ಸೂಚಿಸುತ್ತವೆ. ಕೇರಳದ ದೇವಾಲಯಗಳಲ್ಲಿ ಮರದ ಮದನಿಕೆ ಬೊಂಬೆಗಳೂ ಇರುವುದುಂಟು. ತ್ರಿಚೂರು ಜಿಲ್ಲೆಯ ಅರಿಯನೂರು ಬಳಿಯ ದೇವಾಲಯವೊಂದರಲ್ಲಿರುವ ನೃತ್ಯಗಾತಿಯರ ಚೀತೋಹಾರಿ ಬೆಡಗು ಲೋಕಪ್ರಸಿದ್ಧವಾಗಿವೆ. ಕೇರಳದ ಉತ್ತಮ ಮರದ ಕೆತ್ತನೆಗಳೆಲ್ಲ ಹೆಚ್ಚಾಗಿ 16-19ನೆಯ ಶತಮಾನಗಳಿಗೆ ಸೇರಿದವು.     			
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ